ಅಮೆರಿಕ ಸಂಯುಕ್ತಸಂಸ್ಥಾನ

ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತವಾದ ಈ ರಾಷ್ಟ್ರ ಉತ್ತರ ಅಮೆರಿಕದಲ್ಲಿ 25 ಮತ್ತು 49 ಡಿಗ್ರಿ ಉತ್ತರ ಅಕ್ಷಾಂಶ, 69 ಮತ್ತು 125 ಡಿಗ್ರಿ ಪಶ್ಚಿಮ ರೇಖಾಂಶಗಳ ನಡುವೆ ಇದೆ. ಬಳಕೆಯಲ್ಲಿ ಅಮೆರಿಕವೆಂದೇ ಪ್ರಸಿದ್ಧವಾಗಿದೆ. ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ, ದಕ್ಷಿಣಕ್ಕೆ ಮೆಕ್ಸಿಕೊ ಕೊಲ್ಲಿ ಮತ್ತು ಮೆಕ್ಸಿಕೊ ದೇಶ, ಪಶ್ಚಿಮಕ್ಕೆ ಪೆಸಿಫಿಕ್ ಸಾಗರ, ಉತ್ತರಕ್ಕೆ ಕೆನೆಡಾ ದೇಶಗಳಿವೆ. ಖಂಡಾಂತರಪ್ರದೇಶದ ವಿಸ್ತೀರ್ಣ (30,22,387) ಚ.ಮೈ. ಎಲ್ಲೆಯಾಚೆ ಈ ರಾಷ್ಟ್ರಕ್ಕೆ ಸೇರಿರುವ ಪ್ರದೇಶಗಳಲ್ಲಿ ಅಲಾಸ್ಕ, ಹವಾಯ್, ಪನಾಮಾ ಕಾಲುವೆಪ್ರಾಂತ್ಯ-ಇವು ಮುಖ್ಯವಾದುವು. ಅಲಾಸ್ಕ ಮತ್ತು ಹವಾಯ್ ದೇಶಗಳೂ ಸೇರಿ ಜನಸಂಖ್ಯೆ 1960ರಲ್ಲಿ 18 ಕೋಟಿಯಿತ್ತು. ಕೆಲವೇ ವರ್ಷಗಳಲ್ಲಿ 20 ಕೋಟಿಯನ್ನು ಮೀರಬಹುದೆಂದು ತಜ್ಞರ ಅಭಿಪ್ರಾಯ. 65% ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. 1960ರಲ್ಲಿ 83 ನಗರಗಳ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದುವು.

	ಭೂಮಿಯ ಮೇಲ್ಮೈರಚನೆಗನುಸಾರವಾಗಿ ಸಂಯುಕ್ತಸಂಸ್ಥಾನವನ್ನು ಐದು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. 1 ಪೂರ್ವದ ಸಮುದ್ರತೀರ ಪ್ರದೇಶ, ತೃತೀಯ ಯುಗಕ್ಕೆ ಹಿಂದಿನ ಕಾಲದ ಅವಸಾದೀ ಶಿಲೆಗಳಿಂದ ಕೂಡಿದ ಈ ಭೂಮಿ ಅಟ್ಲಾಂಟಿಕ್ ಸಾಗರದ ಕಡೆಗೆ ಇಳಿಜಾರಾಗಿದೆ. ನ್ಯೂಯಾರ್ಕಿನ ಉತ್ತರಕ್ಕೆ ಮಾತ್ರ, ಇತ್ತಿಚೆಗೆ ಆದ ಭೂಕುಸಿತದಿಂದಾಗಿ ಬಹುಭಾಗವನ್ನು ಸಮುದ್ರ ಆವರಿಸಿದೆ. 2 ಈ ತೀರದ ಪಶ್ಚಿಮಕ್ಕಿರುವ ಅಪಲೇಚಿಯನ್ ಪರ್ವತಪ್ರಾಂತ್ಯ. ಇಲ್ಲಿ ಕಡಿದಾದ ಪರ್ವತಶ್ರೇಣಿಗಳು, ಕಣಿವೆಗಳು, ಪ್ರಸ್ಥಭೂಮಿಪ್ರದೇಶಗಳು ಇವೆ. ಇದು ಪ್ರಪಂಚದಲ್ಲೇ ಅತಿದೊಡ್ಡ ಕಲ್ಲಿದ್ದಲು ಗಣಿಪ್ರದೇಶ. 3 ಇದರ ಪಶ್ಚಿಮಕ್ಕೆ, ವಿಶಾಲವಾದ ಮಿಸಿಸಿಪ್ಪಿ ಜಲಾನಯನಭೂಮಿ ಅತ್ಯಂತ ಫಲವತ್ತಾದ ನದೀಬಯಲು. ಇಲ್ಲಿ ಆಗುವಷ್ಟು ಧಾನ್ಯಗಳ ಉತ್ಪನ್ನ ಬೇರೆಲ್ಲೂ ಇಲ್ಲ. ಉತ್ತರಭಾಗದಲ್ಲಿ ಅಪಾರವಾಗಿ ಕಲ್ಲಿದ್ದಲು ದಕ್ಷಿಣದಲ್ಲಿ ಕಲ್ಲೆಣ್ಣೆ ದೊರಕುತ್ತವೆ. ಪಶ್ಚಿಮಕ್ಕೆ ಹೋದಂತೆ ಈ ಬಯಲು ರಾಕಿಪರ್ವತಗಳ ಕಡೆಗೆ ಸ್ವಲ್ಪಸ್ವಲ್ಪವಾಗಿ ಎತ್ತರವಾಗುತ್ತದೆ. 4 ಈ ಬಯಲಿನ ಮಧ್ಯದಲ್ಲಿ ಕೊಂಚ ದಕ್ಷಿಣಕ್ಕೆ ಒಂದು ಬೆಟ್ಟಗುಡ್ಡ ಪ್ರದೇಶವಿದೆ. ಇದರ ಮುಖ್ಯಭಾಗವನ್ನು ಓಸಾóರ್ಕ್ ಪ್ರಸ್ಥಭೂಮಿ ಎಂದು ಕರೆಯುತ್ತಾರೆ. 5 ಇದಕ್ಕೆ ಪಶ್ಚಿಮದಲ್ಲಿ ದೇಶದ 1/3 ಭಾಗದಷ್ಟು ಪ್ರದೇಶವನ್ನಾಕ್ರಮಿಸಿರುವ ಪರ್ವತಶ್ರೇಣಿಗಳು ಮತ್ತು ಪ್ರಸ್ಥಭೂಮಿಗಳಿವೆ. ಉನ್ನತಪ್ರದೇಶದ ಪೂರ್ವದ ಅಂಚು ರಾಕಿಪರ್ವತಶ್ರೇಣಿ. ಆದರೆ ಪಶ್ಚಿಮದ್ದೆ ಪ್ರಸ್ಥಭೂಮಿ. ಇನ್ನೂ ಪಶ್ಚಿಮಕ್ಕೆ ಇದಕ್ಕಿಂತ ತಗ್ಗಾದ ಜಲಾನಯನಭೂಮಿ. ಇದರ ಪಶ್ಚಿಮದ ಅಂಚಿನಲ್ಲಿ ಪರ್ವತ ಶ್ರೇಣಿಯಿದೆ. ಇದಕ್ಕೂ ಪೆಸಿಫಿಕ್ ಸಾಗರತೀರಕ್ಕೂ ಮಧ್ಯೆ ಸಮಾನಾಂತರ ಪರ್ವತಶ್ರೇಣಿಗಳೆರಡಿವೆ. ಈ ಶ್ರೇಣಿಗಳ ಮಧ್ಯೆ ಅತ್ಯಂತ ಫಲವತ್ತಾದ ಪ್ರಖ್ಯಾತ ಕ್ಯಾಲಿಫೋರ್ನಿಯ ಕಣಿವೆ ಇದೆ.

	ಪೂರ್ವ ತೀರದಲ್ಲಿ ಆಳವಾದ ನದೀಮುಖಗಳಿರುವುದರಿಂದ ವ್ಯಾಪಾರಯೋಗ್ಯವಾದ ಬಂದರುಗಳಿವೆ. ಪಶ್ಚಿಮತೀರದಲ್ಲಿ ಸ್ಯಾನ್‍ಫ್ರಾನ್ಸಿಸ್ಕೊ, ಪ್ಯೂಜೆಟ್ ಸೌಂಡ್ ಎರಡೇ ಉಪಯುಕ್ತ ರೇವುಗಳು.

	ವಾಯುಗುಣ : ಇಷ್ಟೊಂದು ವ್ಯಾಪಕವಾಗಿರುವ ಸಂಯುಕ್ತಸಂಸ್ಥಾನದಲ್ಲಿ ವಾಯುಗುಣದ ವೈವಿಧ್ಯವಿರುವುದೂ ಸಹಜ. ಆಗ್ನೇಯಭಾಗದಲ್ಲಿ ಉಷ್ಣವಲಯದ ವಾಯುಗುಣವಿದೆ; ಬೇಸಿಗೆಗೂ ಚಳಿಗಾಲಕ್ಕೂ ಶಾಖದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಪೂರ್ವದ ಮತ್ತು ಮಧ್ಯದ ಪ್ರದೇಶಗಳಲ್ಲಿ ಈ ವ್ಯತ್ಯಾಸ ಹೆಚ್ಚು. ಪಶ್ಚಿಮದ ತೀರ ಪ್ರದೇಶಗಳಲ್ಲಿ ಕಡಿಮೆ. ಮಳೆ ಅಟ್ಲಾಂಟಿಕ್ ತೀರದ ಪ್ರದೇಶಗಳಲ್ಲಿ, ಅಲಬಾಮ, ಮಿಸಿಸಿಪ್ಪಿ ಮತ್ತು ಮೆಕ್ಸಿಕೊ ಕೊಲ್ಲಿಯ ಸುತ್ತಣ ಪ್ರಾಂತಗಳಲ್ಲಿ ಹೆಚ್ಚು; ಪಶ್ಚಿಮಕ್ಕೆ ಹೋದಂತೆ ಕಡಿಮೆ. ಕೊಲೊರಾಡೊ, ಕ್ಯಾಲಿಫೋರ್ನಿಯಗಳಲ್ಲೂ ಕಡಿಮೆಯೆ. ಆದರೆ ಪೆಸಿಫಿಕ್ ತೀರದ ಉತ್ತರಭಾಗದಲ್ಲಿ ಮಳೆ ಸಮೃದ್ಧ. ಮಳೆ ತೀರ ಕಡಿಮೆಯಾಗಿರುವ ಪ್ರಾಂತಗಳು ನ್ಯೂಮೆಕ್ಸಿಕೊ, ನೆವಾಡ, ಮಾಂಟಾನ ಮತ್ತು ಅರಿeóÉೂೀನ. ಪೆಸಿಫಿಕ್ ಸಾಗರದ ಮೇಲಿಂದ ಬರುವ ಮಾರುತಗಳನ್ನು ಸಿಯಾರ ನೆವಾಡ ಪರ್ವತಗಳು ತಡೆಯುವುದರಿಂದ ಯೂಟ ಮತ್ತು ನೆವಾಡಗಳಲ್ಲಿ ವಾರ್ಷಿಕ ಮಳೆ 10" ಕಡಿಮೆ. ಚಳಿಗಾಲದಲ್ಲಿ ಕೆನಡ ಕಡೆಯಿಂದ ಬೀಸುವ ಚಳಿಮಾರುತಗಳಿಗೆ ತಡೆಯಿಲ್ಲದಿರುವುದರಿಂದ ಮಿಸೌರಿ ಮಿಸಿಸಿಪ್ಪಿ ಬಯಲಿನ ಉತ್ತರ ಭಾಗದಲ್ಲಿ ತುಂಬ ಚಳಿ.	
ಉತ್ಪನ್ನಗಳು, ವಾಣಿಜ್ಯ :	ಸಂಯುಕ್ತಸಂಸ್ಥಾನದ ಎಲ್ಲ ವಿಧದ ಖನಿಜಗಳೂ ಹೇರಳವಾಗಿ ಸಿಕ್ಕುತ್ತವೆ. ಏಳು ಭಾರಿ ಕಲ್ಲಿದ್ದಲು ಗಣಿಗಳಿವೆ. ಸುಪೀರಿಯರ್ ಸರೋವರದ ಹತ್ತಿರ ಭಾರಿ ಕಬ್ಬಿಣದ ಅದುರಿನ ಗಣಿಗಳಿವೆ. ಉತ್ತಮ ದರ್ಜೆಯ ತಾಮ್ರವೂ ಅನಿಲಗಳು ಟೆಕ್ಸಾಸ್, ಓಕಹೋಮ, ಕ್ಯಾಲಿಫೋರ್ನಿಯ ಪ್ರಾಂತ್ಯಗಳಲ್ಲಿ ಹೇರಳವಾಗಿವೆ. ಪ್ರಶಸ್ತಲೋಹಗಳು ಕ್ಯಾಲಿಫೋರ್ನಿಯ, ಇಡಾಹೊ, ಮಾಂಟಾನ, ಯೂಟ, ಅರಿeóÉೂೀನ, ಅಲಾಸ್ಕಾಗಳಲ್ಲಿ ವಿಪುಲವಾಗಿವೆ. ದೇಶದ ಕೈಗಾರಿಕಾಪ್ರಗತಿಗೆ ಅವಶ್ಯಕವಾದ ಎಲ್ಲ ಸಾಧನಗಳನ್ನೂ ನಿಸರ್ಗವೇ ಒದಗಿಸುತ್ತದೆ. ವ್ಯವಸಾಯೋತ್ಪನ್ನದಲ್ಲೂ ದೇಶ ಬೃಹತ್‍ಪ್ರಮಾಣದಲ್ಲಿ ಅನುಕೂಲತೆಯನ್ನು ಪಡೆದಿದೆ. ಭೂಮಿಯ 60% ಭಾಗದಲ್ಲಿ ವ್ಯವಸಾಯ ನಡೆದಿದೆ. ಸುಮಾರು 43 ಲಕ್ಷ ಜನರ ಉದ್ಯೋಗ ಕೃಷಿ. ಗೋದಿ, ಓಟ್ಸ್, ಜವೆ ಮತ್ತು ಇತರ ಧಾನ್ಯಗಳು ಮುಖ್ಯ ಬೆಳೆಗಳು. ಬತ್ತವನ್ನೂ ಕೆಲವು ಕಡೆ ಬೆಳೆಯುತ್ತಾರೆ. ಕೆಂಚುಕಿ, ದಕ್ಷಿಣ ಕೆರೊಲಿನ, ವರ್ಜಿನಿಯ, ಉತ್ತರ ಕೆರೊಲಿನ, ಟೆನೆಸ್ಸಿ, ಜಾರ್ಜಿಯ ಪ್ರಾಂತಗಳಲ್ಲಿ ಹೊಗೆಸೊಪ್ಪು ಮುಖ್ಯ ಬೆಳೆಯಾಗಿದೆ. ಹತ್ತಿಯನ್ನು ಅನೇಕ ಪ್ರಾಂತಗಳಲ್ಲಿ ಬೆಳೆಯುತ್ತಾರೆ ; ಹೆಚ್ಚಾಗಿ ಬೆಳೆಯುವುದು ಟೆಕ್ಸಾಸ್‍ನಲ್ಲಿ. ಲೂಸಿಯಾನದಲ್ಲಿ ಸಕ್ಕರೆಯ ಉತ್ಪನ್ನ ಹೆಚ್ಚು; ಅನೇಕ ಕಡೆಗಳಲ್ಲಿ ಬೀಟ್ ಗೆಡ್ಡೆಯಿಂದ ಸಕ್ಕರೆ ಉತ್ಪಾದಿಸುತ್ತಾರೆ. ಪಶುಸಂಗೋಪನವೂ ಅಗಾಧಪ್ರಮಾಣದಲ್ಲಿ ಬೆಳೆದಿದೆ. 1960ರ ಗಣತಿ ಪ್ರಕಾರ ಸುಮಾರು 30 ಲಕ್ಷ ಕುದುರೆ, 9 ಕೋಟಿ ಹೇಸರಕತ್ತೆಗಳು, 62 ಲಕ್ಷ ದನಕರುಗಳು, 3 ಕೋಟಿ ಲಕ್ಷ ಕುರಿಗಳು, 60 ಲಕ್ಷ ಹಂದಿಗಳು ಇದ್ದುವು.

	ಇಂಥ ಅಗಾಧ ಮೂಲಸಂಪತ್ತನ್ನು ಪಡೆದಿರುವ ಸಂಯುಕ್ತ ಸಂಸ್ಥಾನ ಬೃಹತ್ ಕೈಗಾರಿಕೆಗಳನ್ನು ಬೆಳೆಸಿಕೊಂಡಿರುವುದೇನೂ ಆಶ್ಚರ್ಯವಲ್ಲ. ರಾಷ್ಟ್ರದ ಅತ್ಯಂತ ದೊಡ್ಡ ಕೈಗಾರಿಕಾಪ್ರದೇಶ. ಬೃಹತ್ ಸರೋವರಗಳಿಂದ ಇಲ್ಲಿನಾಯ್ ಇಂಡಿಯಾನಗಳವರೆಗೂ ಹರಡಿದೆ. ಇತ್ತೀಚಿನ ಮೂವತ್ತು ವರ್ಷಗಳಲ್ಲಿ ದೇಶದ ಆಗ್ನೇಯ, ನೈಋತ್ಯಭಾಗಗಳಿಗೂ ಕೈಗಾರಿಕೆ ವ್ಯಾಪಿಸಿದೆ. ಯಾಂತ್ರೀಕರಣ ಎಲ್ಲ ರಂಗಗಳಲ್ಲೂ ಬೆಳೆದಿರುವುದರ ಪರಿಣಾಮವಾಗಿ ಕೈಗಾರಿಕೆಯಲ್ಲಿ ಯಂತ್ರಕಲಾಪರಿಣತರ ಸಂಖ್ಯೆ ಕೊಂಚ ಹೆಚ್ಚಿದೆಯೇ ಹೊರತು ಕಾರ್ಮಿಕರ ಸಂಖ್ಯೆ ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. 1880ರಿಂದಲೂ ರಾಷ್ಟ್ರದ ರಫ್ತು ಅಮದಿಗಿಂತಲೂ ಹೆಚ್ಚಾಗಿಯೇ ಇದೆ. ರಫ್ತಾಗುವ ವಸ್ತುಗಳು-ಕಲ್ಲಿದ್ದಲು ಮೊದಲಾದ ಅದುರುಗಳು, ಹತ್ತಿ, ಹೊಗೆಸೊಪ್ಪು ಮುಂತಾದ ಕಚ್ಚಾ ಪದಾರ್ಥಗಳು, ಆಹಾರಪದಾರ್ಥಗಳು, ತಯಾರಾದ ಯಾಂತ್ರಿಕ ಸಲಕರಣೆಗಳು ಮತ್ತು ಇತರ ಸಿದ್ದ ವಸ್ತುಗಳು.

	ವಿಶಾಲವಾದ ನದಿಬಯಲುಗಳು, ವಾಯುಗುಣದ ವೈವಿಧ್ಯ, ವಾಣಿಜ್ಯ ಮಾರುತಗಳು ತರುವ ಸಮೃದ್ಧ ಮಳೆ-ಇವುಗಳಿಂದ ಸಂಯುಕ್ತಸಂಸ್ಥಾನ ಅತ್ಯಂತ ಸಂಪದ್ಭರಿತ ರಾಷ್ಟ್ರವಾಗಿದೆ. ಕೃಷಿ ಉತ್ಪನ್ನಗಳಲ್ಲಿ, ಕೈಗಾರಿಕೆಗೆ ಬೇಕಾದ ಸಂಪನ್ಮೂಲಗಳಲ್ಲಿ, ಮರಮಟ್ಟುಗಳಿಗೆ ಕಾಗದ ತಯಾರಿಕೆಗೆ ಬೇಕಾದ ಅರಣ್ಯಸಂಪತ್ತಿನಲ್ಲಿ, ವ್ಯಾಪಾರಕ್ಕೆ ಅವಶ್ಯಕವಾದ ಸ್ವಾಭಾವಿಕ ಬಂದರುಗಳಲ್ಲಿ, ಯಾವುದರಲ್ಲೂ ಈ ರಾಷ್ಟ್ರಕ್ಕೆ ಕೊರತೆಯಿಲ್ಲ. ಅದರ ಐಹಿಕ ಪ್ರಗತಿಗೆ ಇದೇ ಮೂಲ. ಚಂದ್ರಲೋಕಕ್ಕೆ ಮಾನವನನ್ನು ಕಳುಹಿಸುವಂಥ ಸಾಹಸ ಅವರಿಗೆ ಸಾಧ್ಯವಾಗಿರುವುದು, ಅಪಾರ ಸಂಪತ್ತಿನ ಸಹಾಯದಿಂದ. ಅವರು ಹೊಂದಿರುವ ವೈಜ್ಞಾನಿಕ ಪ್ರಗತಿಯಿಂದ. ಅಂತರರಾಷ್ಟ್ರೀಯ ದೃಷ್ಟಿಯಿಂದ ನೋಡುವುದಾದರೆ ವಿಶ್ವಸಂಸ್ಥೆ ಹುಟ್ಟಿ ಬೆಳೆದಿರುವುದು ಇಲ್ಲಿಯೇ.

	ಈ ಬೃಹದ್ರಾಷ್ಟ್ರದ ಬಗ್ಗೆ ಅನೇಕ ಲೇಖನಗಳಿವೆ. ಮುಖ್ಯವಾಗಿ ಉತ್ತರ ಅಮೆರಿಕ, ಅಮೆರಿಕದ ಇತಿಹಾಸ, ಅಮೆರಿಕದ ಕಾಯಿದೆ, ಅಮೆರಿಕದ ಚರಿತ್ರೆಯಲ್ಲಿ ನೀಗ್ರೊ, ಅಮೆರಿಕದ ರಿಪಬ್ಲಿಕನ್ ಪಕ್ಷ, ಅಮೆರಿಕದ ಡೆಮಾಕ್ರಟಿಕ್ ಪಕ್ಷ, ಅಮೆರಿಕದ ಸ್ವಾತಂತ್ರ್ಯ-ಈ ಲೇಖನಗಳನ್ನು ನೋಡಿ. ಉಳಿದೆಲ್ಲ ವಿವರಗಳಿಗೆ ಸೂಚೀಸಂಪುಟವನ್ನು ನೋಡಿ.	  				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ